ಈ ಸಹನಶೀಲತೆ ನಮಗೆ ಮುಖ್ಯ!
ನಾವು ಬೇರೆಯವರ ಅಭಿಪ್ರಾಯಗಳನ್ನು ಸ್ವೀಕರಿಸುವ ಸಹನಶೀಲತೆಯನ್ನು ಕಳೆದುಕೊಂಡಿದ್ದೇವೆ. ಮನದ ಮಾತನ್ನು ಹೇಳಲು ಹೆದರುತ್ತಿದ್ದೇವೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸದೆ ಸುಮ್ಮನಿರುತಿದ್ದೇವೆ. ಪ್ರಜಾಪ್ರಭುತ್ವದ ಕೃತ್ಯಗಳನ್ನು ಎದುರಿಸದೆ ಸುಮ್ಮನೆ ಇರುತ್ತಿದ್ದೇವೆ. ಒಟ್ಟಿನಲ್ಲಿ ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಸಂಗತಿಗಳ ಬಗ್ಗೆ ಮೌನವಾಗುತ್ತಿದ್ದೇವೆ. ನಮಗೆ ಸುಮ್ಮನೆ ಇರಲು ಹೇಳಿಕೊಡುತ್ತ, ಅಭಿಪ್ರಾಯಗಳನ್ನು ವ್ಯಕ್ತ ಪಡಿಸೋದಕ್ಕೆ ಹಿಂಜರಿಯುವ ಹಾಗೆ ಸಮಾಜ ನಮ್ಮನ್ನು ಬೆಳೆಸಿದೆ, ಬೆಳೆಸುತ್ತಿದೆ.
ನಮಗೆಲ್ಲರಿಗೂ ಚಿಕ್ಕವಯಸ್ಸಿನಿಂದ "ಸುಮ್ಮನೆ ಇರು!" ಎಂದು ಹೇಳಿಕೊಟ್ಟಿರಲಾಗಿದೆ. ಶಾಲೆಯಲ್ಲಿ ಮೇಷ್ಟ್ರು ಸರಿಯಾಗಿ ಪಾಠಮಾಡುತ್ತಿಲ್ಲ ಎಂದು ಹೇಳಿದಾಗ, "ಸುಮ್ನಿರು! ಎಲ್ಲದಕ್ಕೂ ಕಂಪ್ಲಿನ್ಟ್ ಮಾಡ್ಬೇಡ, " ಅಂತಿದ್ರು. ರಸ್ತೆಯಲ್ಲಿ ಯಾರಾದರೂ ತಪ್ಪು ಕೆಲಸ ಮಾಡಿದರೆ, ಅವರನ್ನ ತ್ತಿದ್ದೋಕೆ ಹೋದರೆ "ಸುಮ್ನಿರು! ನಿಂಗ್ಯಾಕೆ ಅದ್ದೆಲ್ಲ", ಅಂತ ಹೇಳ್ತಾರೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಮಾತನಾಡಿದರೆ " ಸುಮ್ನಿರು! ಒಬ್ಬಳೇ/ಒಬ್ಬನೇ ಏನು ಮಾಡಲು ಸಾಧ್ಯ?" ಅಂತಾರೆ. ಕೊನೆಗೆ ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾಗಿ ಅವರಿಗೆ ಸಹಾಯ ಮಾಡಲು ಹೋಗುವಾಗಲೂ, ನಿನಗ್ಯಾಕೆ ಅದರ ಸುದ್ದಿ? ಎದು ಹೇಳುವವರೇ ಎಲ್ಲರೂ.
ಇವರೆಲ್ಲರ ಮಧ್ಯದಲ್ಲಿ ಮನದಾಳದ ಮಾತುಗಳ್ಳನ್ನು, ಇರೋ ವಿಷಯವನ್ನು ಇರೋತರ ಹೇಳುತ್ತಾರೆ ಕೆಲವರು. ಇಂತವರ ಧ್ವನಿಯನ್ನು ಸದಾ ನಿಲ್ಲಿಸುವ ಪ್ರಯತ್ನ ಬಲಿಷ್ಠರದು. ಇವರುಗಳು ಕೆಲವೊಮ್ಮೆ ಬಹಿಸ್ಕರವಾದರೆ, ಇನ್ನು ಕೆಲವೊಮ್ಮೆ ಕೊಲೆಗೆ ಈಡಾಗುತ್ತಾರೆ. ಇತ್ತೀಚಿಗೆ ನಡೆದ ಘೋರ ಘಟನೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಇದಕ್ಕೊಂದು ಉದಾಹರಣೆ. ಗುಂಡೇಟಿಗೆ ಬಲಿಯಾದ ಇವರು, ಮುಚ್ಚು ಮರೆಯಿಲ್ಲದೆ ಅವರ ಮನಸ್ಸಿನ ಮಾತುಗಳ್ಳನ್ನು ವ್ಯಕ್ತಪಡಿಸುತ್ತಿದ್ದವರು. ಇವರ ಕೆಲವ ವಿಚಾರಗಳು ವಿವಾದಾತ್ಮಕವಾಗಿದ್ದರು, ಅವುಗಳನ್ನು ವಿಚಾರಾತ್ಮಕ ನೆಲೆಯಲ್ಲಿ ವಿರೋದಿಸಬೇಕಿತ್ತೇ ಹೊರೆತು, ಅವರ ಧ್ವನಿಯನ್ನು ಶಾಶ್ವತವಾಗಿ ನಿಶಬ್ದಗೊಳಿಸಿದ್ದು ಸರಿಯಲ್ಲ.
ಮಹಿಳೆಯರ ಸಂರಕ್ಷಣೆ, ಅವರು ಧರಿಸುವ ಉಡುಪುಗಳು, ಉಗ್ರರ ದಾಳಿ, ಧಾರ್ಮಿಕ ನಂಬಿಕೆಗಳು, ಜಾತಿ, ಮತ, ಕುಲ ಹೀಗೆ ಎಷ್ಟೋ ವಿಷಯಗಳ ಬಗ್ಗೆ ಮಾತಾಡೋ ಎಷ್ಟೋ ಜನ ಇದ್ದಾರೆ. ಇವರಲ್ಲಿ ಕೆಲವರು ಈ ವಿಷಯಗ ಬಗ್ಗೆ ತಿಳುವಳಿಕೆ ಇರುವವರು, ಕೆಲವರು ಇಲ್ಲದವರು. ವೇದಿಕೆ ಸಿಕ್ಕಿದೆ ಎಂದು ಕೆಲವರು ತಮಗೆ ವಿಷಯ ಸಂಪೂರ್ಣವಾಗಿ ತಿಳಿಯದಿದ್ದರೂ ಮಾತನಾಡುತ್ತಾರೆ. ಇದರಿಂದ ಸಮಾಜದಲ್ಲಿ ಬಿರುಕು ಉಂಟಾಗುತ್ತದೆ. ಸಂಘರ್ಷಗಳು ಉಂಟಾಗುತ್ತವೆ. ಆದುದರಿಂದ ಇವುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸಮಾಜ ಬೆಳೆಯಬೇಕಾಗರೆ ಆರೋಗ್ಯವಾದ ವಿವಾದ ಅತ್ಯಗತ್ಯ. ಅಂತದ್ರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅದನ್ನು ವ್ಯಕ್ತಪಡಿಸೋದಕ್ಕೆ ಅವಕಾಶ ಕೊಡದಿದ್ದರೆ ಸಮಾಜ ಬೆಳೆಯೋದಿಲ್ಲ. ಬೇರೆಯವರ ಅಭಿಪ್ರಾಯಗಳನ್ನು ಕೇಳುವ ಹಾಗು ಸ್ವೀಕರಿಸುವ ಸಹನಶೀಲತೆಯನ್ನು ನಾವು ಬೆಳೆಸಿಕೊಳ್ಳಬೇಕು.
Comments
Post a Comment