ಮಳೆಗಾಲ...ಮಳೆರಾಯ...
ದಿನವು ಕಳೆಯುವುದು, ಕಾಲವು ಉರುಳುವುದು
ಆಗಲೇ ಬರುವುದು ಮಳೆಗಾಲ
ಬಿಸಿಲನು ನುಂಗುತ, ಚಳಿಯನು ತರುತಾ
ಧರೆಗಿಳಿಯುವನು ಮಳೆರಾಯ
ಗಾಳಿಯನು ಬೀಸಿ, ಮುಗಿಲನು ಓಡಿಸಿ
ಸಿಡಿಲನು ಸಿಡಿಸುವುದು ಮಳೆಗಾಲ
ಮುಗಿಲಿಗೆ ಮುಗಿಲನು ಡಿಕ್ಕಿ ಹೊಡೆಸುತ
ಮಿಂಚುತ ಬರುವನು ಮಳೆರಾಯ
ನೀರನು ಸುರಿಸಿ, ಧರೆಯನು ನೆನೆಸಿ
ಜೀವವ ಉಳಿಸುವುದು ಮಳೆಗಾಲ
ಗಿಡವನು ಬೆಳೆಸಿ, ಮರವನು ಉಳಿಸಿ
ಹುಲ್ಲನು ರಕ್ಷಿಸುವನು ಮಳೆರಾಯ
ನೀರನು ಹನಿಸಿ, ಪೈರನು ಅರಳಿಸಿ
ನೆಲವ ಹಸಿರು ಮಾಡುವುದು ಮಳೆಗಾಲ
ರೈತನ ಮೊಗದೊಳು ಸಂತಸ ತರಿಸಿ
ತಂಪನು ನೀಡುತ ಸಾಗುವ ಮಳೆರಾಯ
ಕೆರೆಗಳ ತುಂಬಿಸಿ, ನದಿಗಳ ಹರಿಸಿ
ಎಲ್ಲರಿಗು ಸಂತೋಷ ನೀಡುವುದು ಮಳೆಗಾಲ
ಬಾಲ್ಯನೆನಪು ಕಾಡಿಸಿ, ದೊಡ್ಡವರನು ಚಿಕ್ಕವರಾಗಿಸಿ
ಮಕ್ಕಳ ಮನಸನು ಕುಣಿಸುವನು ಮಳೆರಾಯ
ಜೀವ ಸಂಕುಲದ ದಾಹವ ನೀಗಿಸಿ
ಸ್ವಚ್ಛತೆಯ ಅರಿವು ಮೂಡಿಸುವುದು ಮಳೆಗಾಲ
ಧೂಳನು ಕುಗ್ಗಿಸಿ, ರೋಗವ ಅಳಿಸಿ
ನೆಲದ ಮಲಿನವ ತೊಡೆಯುವನು ಮಳೆರಾಯ.
Comments
Post a Comment