ಹಬ್ಬದ ಜೊತೆಯಿರಲಿ ಪರಿಸರ ಕಾಳಜಿ

ಮತ್ತೆ ಬಂದಿದೆ ಸಂಭ್ರಮದ ಗೌರಿ ಗಣೇಶ ಹಬ್ಬ. ಗೌರಿಗಣೇಶ ವಿಗ್ರಹವನ್ನು ಆರಾಧಿಸಲು ಮನೆ ಮನೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕವಾಗಿಯೂ ಭರ್ಜರಿ ತಯಾರಿ ನಡೆಯುತ್ತಿದೆ. ಈ ಸಡಗರವನ್ನು ಇನ್ನು ಹೆಚ್ಚಿಸಲು ಮಾರುಕಟ್ಟೆಯು ಸಜ್ಜಾಗಿದೆ. ಹಲವು ಬಗೆಯ ಗೌರಿ ಗಣೇಶ ವಿಗ್ರಹಗಳು ಕಳೆದೊಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ. ರಂಗು ರಂಗಿನ ಮನಸೆಳೆಯುವ ವಿನ್ಯಾಸ, ಸಣ್ಣ ಗಾತ್ರದಿಂದ ಹಿಡಿದು ಬೃಹದಾಕಾರ ವಿಗ್ರಹಗಳು ಹೀಗೆ ಭಕ್ತರನ್ನು ಆಕರ್ಷಿಸುವ ಕಸರತ್ತು ನಡೆಯುತ್ತಿದೆ. 

ಆದರೆ ಈ ಭಕ್ತಿ ಭಾವದ ಹಿಂದೆ ಪರಿಸರ ಸಂರಕ್ಷಣೆಯ ಕಾಳಜಿ ಎಷ್ಟುಮಂದಿಗಿದೆ? ಬಾಹ್ಯ ಸ್ವರೂಪಕ್ಕೆ ಆಕರ್ಷಿತರಾಗುವ ಜನ ಒಂದು ಕಡೆ, ಅದನ್ನು ನಗದೀಕರಿಸಿಕೊಳ್ಳಲು ಹಾತೊರೆಯುವ ವ್ಯಾಪಾರಿಗಳು ಇನ್ನೊಂದೆಡೆ. ಇವುಗಳ ಮಧ್ಯೆ ಪರಿಸರಕ್ಕೆ ಹಾನಿಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ಮಾರಾಟ ಮಾಡಬಾರದು, ಖರೀದಿ ಮಾಡಬಾರದು ಎಂಬ ತಿಳುವಳಿಕೆ, ಇದರಿಂದಾಗುತ್ತಿರುವ ಜಲಮಾಲಿನ್ಯ ಜನರಲ್ಲಿ ಇನ್ನು ಕಂಡುಬರುತ್ತಿಲ್ಲ. 

ಪಿಓಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಜಲಮೂಲಗಳಿಗೇ ಹಾನಿಯುಂಟು ಮಾಡುತ್ತವೆ. ಜೊತೆಗೆ ಇವುಗಳಿಗೆ ಬಳಿಯುವ ಬಣ್ಣದಲ್ಲಿರುವ ರಾಸಾಯನಿಕ ಜಲಮಾಲಿನ್ಯ ಉಂಟುಮಾಡುವುದಲ್ಲದೆ ಜಲಜೀವರಾಶಿಯ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಇವುಗಳಲ್ಲಿ ಅಪಾಯಕಾರಿ ಕ್ರೋಮಿಯಂ, ಕಾದ್ಮಿಯಂ, ನಿಕೆಲ್, ಆರ್ಸೆನಿಕ್ ಮೊದಲಾದ ರಾಸಾಯನಗಳಿರುತ್ತವೆ. ಹೀಗಿರುವಾಗ ಕೆರೆಗಳಲ್ಲಿ ಸಾವಿರಾರು ವಿಗ್ರಹಗಳನ್ನು ಮುಳುಗಿಸಿದರೆ ಉಂಟಾಗುವ ಅಪಾಯದ ಪ್ರಮಾಣ ಊಹಿಸಲು ಅಸಾಧ್ಯ.



ಕೃತಕ ಬಣ್ಣಗಳ ಬದಲು ಮಣ್ಣಿನ ವಿಗ್ರಹಗಳಿಗೆ ಅರಶಿನ, ಕುಂಕುಮ, ಗೋಪಿಚಂದನವನ್ನು ಲೇಪಿಸಬಹುದು. ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಉಪಯೋಗಿಸಬಹುದು. ಇದಲ್ಲದೆ, ಬಿದಿರು, ಬಾಂಬು, ಹಿಟ್ಟು, ಪೇಪರ್ ಬಳಸಿಯೂ ವಿಗ್ರಹಗಳನ್ನು ತಯಾರಿಸಬಹುದು.  

ರಾಜ್ಯಸರಕಾರ ಹಾಗು ಅನೇಕ ಏನ್ ಜಿ ಓ ಗಳು ಕಳೆದ ಕೆಲವು ವರ್ಷಗಳಿಂದ ಜನಜಾಗೃತಿ ಮೂಡಿಸಿ, ಪರಿಸರ ಸ್ನೇಹಿ ವಿಗ್ರಹಗಳನ್ನು ಖರೀದಿಸುವಂತೆ ತಿಳುವಳಿಕೆ ಹೇಳುತ್ತಿರುವುದು ಗಮನಾರ್ಹ್. ಪಿ ಓ ಪಿ, ಕೃತಕ ಬಣ್ಣ ಬಳಿದ ವಿಗ್ರಹಗಳನ್ನು ನಿಷೇಧಿಸಿ, ಅವುಗಳನ್ನು ತಡೆದು ಹಾಕುವ, ದಂಡವಿಧಿಸುವ ಕಾನೂನು ಕೂಡ ಜಾರಿಯಲ್ಲಿದೆ. ಕೆಲವು ವರ್ಷಗಳಿಂದ ಹಲವು ನಗರಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಸಂಘ ಸಂಸ್ಥೆಗಳು ಉಚಿತವಾಗಿ ವಿತರಿಸುತ್ತಿವೆ.   

 ಈ ಕ್ರಮಗಳಿಂದಾಗಿ ಒಂದೆರಡು ವರ್ಷಗಳಿಂದ ಇಂತಹ ವಿಗ್ರಹಗಳ ಮಾರಾಟ ಕಡಿಮೆಯಾಗಿದ್ದು, ಜನ ಮಣ್ಣಿನ, ನೈಸರ್ಗಿಕ ಬಣ್ಣ ಲೇಪಿಸಿದ, ಬರೀ ಮಣ್ಣಿನಿಂದ ಮಾಡಿದ ವಿಗ್ರಹಗಳತ್ತ ಮುಖ ಮಾಡಿರುವುದು ಸ್ವಾಗತಾರ್ಹ. ಕೇವಲ ಕಾನೂನು ತರುವುದರಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಜನರಿಗೂ ಅರಿವು, ಕಾಳಜಿ ಇರಬೇಕು. ನಗರದ ಸಂಘ ಸಂಸ್ಥೆಗಳನ್ನು, ಶಾಲಾಕಾಲೇಜು ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ಬಳಸಿಕೊಂಡರೆ ಭವಿಷ್ಯದಲ್ಲಿ ಇನ್ನಷು ಸುಧಾರಣೆ ಕಾಣಬಹುದು. 

Comments

Popular posts from this blog

Significant thoughts - from the book 'Unposted Letter'

ಕರೋನ ಪ್ರಭಾವ

Tanishq Advertisement Controversy